ಇಟಗಿ
ರಾಯಚೂರು ಜಿಲ್ಲೆಯ ಯಲ್ಬುರ್ಗ ತಾಲ್ಲೂಕಿನಲ್ಲಿರುವ ಒಂದು ಗ್ರಾಮ. ಚಾಲುಕ್ಯ ವಾಸ್ತುಶೈಲಿಯಲ್ಲಿ ನಿರ್ಮಿತವಾಗಿರುವ ಇಲ್ಲಿಯ ಮಹಾದೇವ ದೇವಾಲಯ ಪ್ರಸಿದ್ಧವಾದುದು. ಕ್ರಿ.ಶ. 1112ರಲ್ಲಿ ಚಾಲುಕ್ಯ ಅರಸರ ಆರನೆಯ ವಿಕ್ರಮಾದಿತ್ಯನ ದಂಡನಾಯಕ ಮಹಾದೇವ ಎಂಬಾತ ಇದನ್ನು ಕಟ್ಟಿಸಿದನೆಂದು ಅಲ್ಲಿಯ ಶಾಸನವೊಂದರಿಂದ ತಿಳಿದುಬರುತ್ತದೆ. ಅದೇ ಶಾಸನದಲ್ಲಿ ಆ ಮಂದಿರವನ್ನು ದೇವಾಲಯಚಕ್ರವರ್ತಿ ಎಂದು ಕರೆಯಲಾಗಿದೆ. ಚಾಲುಕ್ಯ ಶೈಲಿಯ ದೇವಾಲಯಗಳ ಮೇಲೆ ವಿಶೇಷ ಅಧ್ಯಯನ ನಡೆಸಿರುವ ಡಾ. ಕಸಿನ್ಸ್‍ರವರು, ಹಳೇಬೀಡಿನ ದೇವಾಲಯಗಳನ್ನು ಬಿಟ್ಟರೆ, ಇದು ಕರ್ಣಾಟಕದಲ್ಲೇ ಅತ್ಯಂತ ಸುಂದರ ದೇವಾಲಯವೆಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
	
ಚಾಲುಕ್ಯ ಶೈಲಿಯ ಸೂಕ್ಷ್ಮ ವೈಖರಿಗಳಿಂದ ಕೂಡಿರುವ ಈ ದೇವಾಲಯ ಬಹು ಸುಂದರವಾಗಿದೆ. ಗರ್ಭಗೃಹ, ಮುಖಮಂಟಪ, ಮೊಗಸಾಲೆಗಳು-ಇವೆಲ್ಲವೂ ಚೌಕಾಕೃತಿಯಲ್ಲಿವೆ. ಸುತ್ತಲೂ ಗೋಡೆ ಇದೆ. ಗೋಡೆಗಳಲ್ಲೂ ಕಂಬಗಳಲ್ಲೂ ಚೆಲುವಿನ ಅನೇಕ ಕೆತ್ತನೆಗಳಿವೆ. ನಕ್ಷತ್ರಾಕಾರದ ತೆರೆದ ಮಂಟಪ ವಿಶಾಲವಾಗಿ ವಿವಿಧ ಕೆತ್ತನೆಯ ಕಂಬಗಳಿಂದ ರಂಜಿಸುತ್ತಿದೆ. ಇಲ್ಲಿನ ಕೆತ್ತನೆ ಸರಳವಲ್ಲ, ಬಲು ಜಟಿಲ. ಆದರೂ ಲಾಲಿತ್ಯವಿಲ್ಲದಿಲ್ಲ.						 	  
 
(ಎಸ್.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ